ದೇವಕಣಿಗಲೆ
ಅಪೊಸೈಸೇಸೀ ಕುಟುಂಬಕ್ಕೆ ಸೇರಿದ ಒಂದು ಮರ ಟೆಂಪಲ್ ಟ್ರೀ, ಪಗೋಡ ಟ್ರೀ). ಕಾಡುಸಂಪಿಗೆ ಪರ್ಯಾಯ ನಾಮ. ಜಾತಿಯ ವೈಜ್ಞಾನಿಕ ಹೆಸರು ಪ್ಲೂಮೇರಿಯ, ಇದರಲ್ಲಿ ಬಿಳಿ, ಹಳದಿ ಮತ್ತು ಕೆಂಪು ದೇವಕಣಿಗಲೆ ಮುಂತಾದ ಬಗೆಗಳುಂಟು. ಭಾರತದಲ್ಲಿ ದೇವಸ್ಥಾನಗಳ ಆವರಣ, ಸ್ಮಶಾನಗಳ ಆವರಣಗಳಲ್ಲಿ ಇದನ್ನು ಕಾಣಬಹುದು. ಇದರ ತೌರೂರು ಮಧ್ಯ ಅಮೇರಿಕ. ಭಾರತದ ಹವಾಗುಣಕ್ಕೆ ಚೆನ್ನಾಗಿ ಒಗ್ಗಿಕೊಂಡು ಹೆಚ್ಚು ಸಂಖ್ಯೆಯಲ್ಲಿ ಬೆಳೆಯುತ್ತದೆ. ಇದು ಫಿಲಿಪೀನ್ಸ್ ದ್ವೀಪಗಳಿಂದ ಭಾರತಕ್ಕೆ ಬಂದಿತೆಂದು ಹೇಳಲಾಗಿದೆ.

ದೇವಕಣಿಗಲೆ ಸುಮಾರು 3.5-7ಮೀ. ಎತ್ತರಕ್ಕೆ ಬೆಳೆಯುವ ಮರ. ನಿತ್ಯ ಹಸಿರಿನ ಇಲ್ಲವೆ ಭಾಗಶಃ ಪರ್ಣಪಾತಿ ಮರವಾದ ಇದು ಅಗಲವಾಗಿ ಹರಡಿಕೊಂಡು ಬೆಳೆಯುವ ರೆಂಬೆಗಳಿಂದ ಹಾಗೂ ಹೊಳಪಿನ ಎಲೆಗಳಿಂದ ಕೂಡಿದ್ದು ಚೆಲುವಾಗಿ ಕಾಣುತ್ತದೆ. ಇದರಿಂದಾಗಿ ಇದನ್ನು ಉದ್ಯಾನಗಳಲ್ಲಿ ಬೆಳೆಸುವುದೂ ಉಂಟು. ಕಾಂಡದಲ್ಲಿ ಹಾಗೂ ಎಲೆಗಳಲ್ಲಿ ಬಿಳಿಬಣ್ಣದ ಹಾಲ್ನೊರೆ ಇದೆ. ಎಲೆಗಳು ರೆಂಬೆಗಳ ತುದಿಗಳಲ್ಲಿ ಗುಂಪು ಗುಂಪಾಗಿ ಜೋಡಣೆಗೊಂಡಿವೆ. ಎಲೆಗಳ ಉದ್ದ 15-30 ಸೆಂ.ಮೀ.; ಆಕಾರ ದೀರ್ಘವೃತ್ತದಂತೆ ಇಲ್ಲವೆ ತಲೆಕೆಳಗಾದ ಭರ್ಜಿಯ ಮೊನೆಯಂತೆ, ಹೂಗಳು ರೆಂಬೆಗಳ ತುದಿಗಳಲ್ಲಿ ಪ್ಯಾನಿಕಲ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ.  ಹೂಗಳಿಗೆ ಬಿಳಿ, ನಸುಗೆಂಪು, ಕೆನೆ ಮುಂತಾದ ಬಣ್ಣವೂ ಸುವಾಸನೆಯೂ ಉಂಟು. ಹೂಗಳು ಅರಳುವುದು ಜನವರಿ-ಏಪ್ರಿಲ್ ವೇಳೆಗೆ.  ಈ ಕಾಲದಲ್ಲಿ ಇಡೀ ಮರದ ತುಂಬ ಹೂಗಳೇ ತುಂಬಿದ್ದು ಎಲೆಗಳು ಅತಿವಿರಳವಾಗುವುವು. ಭಾರತದ ದೇವಕಣಿಗಲೆಯಲ್ಲಿ ಬೀಜಗಳಾಗುವುದೇ ಅಪರೂಪ. ಇದರಿಂದಾಗಿ ಈ ಮರವನ್ನು ಕಾಂಡತುಂಡುಗಳ ಮೂಲಕ ಬೆಳೆಸಲಾಗುತ್ತದೆ. ದೇವಕಣಿಗಲೆಯ ಹೂವುಗಳನ್ನು ಪೂಜೆಗೆ ಉಪಯೋಗಿಸುವರು. ಹೂಗಳಿಂದ ಸುಗಂಧತೈಲವನ್ನು ತೆಗೆಯುವ ಕ್ರಮವೂ ಉಂಟು. ಹೂಗಳು ಒಣಗಿದರೂ ವಾಸನೆ ಕಡಿಮೆಯಾಗುವುದಿಲ್ಲ. ಆವಿಯಿಂದ ಬಟ್ಟಿ ಇಳಿಸಿ ಎಣ್ಣೆಯನ್ನು ತೆಗೆಯಲಾಗುತ್ತದೆ. ಜ್ವರತಾಪ ಕಡಿಮೆ ಮಾಡಲು ದಳಗಳನ್ನು ವೀಳೆಯದಲೆ ಜೊತೆ ಸೇರಿಸಿ ತಿನ್ನಿಸುವುದುಂಟು.

ಈ ಮರದ ಅನೇಕ ಭಾಗಗಳಿಗೆ ಔಷಧೀಯ ಮಹತ್ವ ಉಂಟು. ತೊಗಟೆಯಿಂದ ಕಷಾಯ ಮಾಡಿ ಮಲಬದ್ಧತೆ, ಜಲೋದರ ರೋಗ, ಗುಹ್ಯರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಹಾಲ್ನೊರೆ ಹಾಗೂ ಬೇರುಗಳು ಭೇದಿಕಾರಕ. ಪ್ರಾಣಿಗಳಿಗೆ ಮಾತ್ರ ವಿಷಪ್ರಾಯವೆನ್ನಲಾಗಿದೆ. ಚೌಬೀನೆ ಹಳದಿ ಅಥವಾ ಬಿಳೀಬಣ್ಣದ್ದು; ಮೃದುವಾಗಿದೆ. ಇದಕ್ಕೆ ಗೆದ್ದಲು ಹಿಡಿಯುವುದಿಲ್ಲ. ಮದ್ದಲೆ, ನಗಾರಿ ಮತ್ತಿತರ ವಾದ್ಯಗಳನ್ನು ಮಾಡಲು ಉಪಯೋಗಿಸುವುದಿದೆ.				    (ಎಚ್.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ